ರೆನಾಯರ್, ಪಿಯರ್ ಅಗಸ್ಟೆ
1841-1919. ಫ್ರಾನ್ಸಿನ ಇಂಪ್ರೆಷನಿ ಸಮ್ ಸಂಪ್ರದಾಯಕ್ಕೆ ಸೇರಿದ ಪ್ರಸಿದ್ಧ ವರ್ಣಚಿತ್ರ ಕಲಾವಿದ. 1841 ಫೆಬ್ರವರಿ 24 ರಂದು ಲಿಮೊಗೆಸ್‍ನಲ್ಲಿ ಜನಿಸಿದ. ಅನಂತರ ಈತನ ತಂದೆ ತಾಯಿಗಳು ಪ್ಯಾರಿಸ್‍ಗೆ ಬಂದರು. ಅಲ್ಲಿ ಇವನನ್ನು ವ್ಯಾಕರಣ ಶಾಲೆಯೊಂದಕ್ಕೆ ಸೇರಿಸಲಾಯಿತು. ಅಲ್ಲಿ ಉಪಾಧ್ಯಾಯನೊಬ್ಬ ಇವನನ್ನು ಸಂಗೀತ ಕಲಿಯಲು ಪ್ರೋತ್ಸಾಹಿಸಿದ. ಆದರೆ ಈತ ರೇಖಾಚಿತ್ರಗಳನ್ನು ಬಿಡಿಸುವುದರಲ್ಲಿ ಮತ್ತು ಬಣ್ಣ ತುಂಬುವುದರಲ್ಲಿ ವಿಶೇಷ ಆಸಕ್ತಿ ತೋರಿದ. ಪ್ಯಾರಿಸ್‍ನ ಪೋರ್ಸಿಲೀನ್ ಫ್ಯಾಕ್ಟರಿಯೊಂದರಲ್ಲಿ ಪಿಂಗಾಣಿಪಾತ್ರೆಗಳ ಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸುವ ಕೆಲಸಕ್ಕೆ ಸೇರಿ ಕೆಲಕಾಲ ದುಡಿದ. ಅನಂತರ ಒಂದು ಕಲಾಶಾಲೆಯಲ್ಲಿ ಕಲಿಯಲು ಸೇರಿದ. ಅಲ್ಲಿ ಇವನಿಗೆ ಮಾನೆಟ್ ಎಂಬ ವರ್ಣಚಿತ್ರಕಾರನ ಭೇಟಿಯಾಯಿತು. ಈ ಅವಧಿಯಲ್ಲಿ ಈತ ತನ್ನ ಬಹಳಷ್ಟು ಕಾಲವನ್ನು ಲಾವ್‍ರೇ ಚಿತ್ರಶಾಲೆಯಲ್ಲಿ ಕಳೆದ. ಆಗ ಆ ಚಿತ್ರಶಾಲೆಯ ವರ್ಣಚಿತ್ರಗ ಳನ್ನು ಅಧ್ಯಯನ ಮಾಡಿದ. ಪ್ಯಾರಿಸ್‍ನ ಹೊರವಲಯದ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಅಲ್ಲಿನ ದೃಶ್ಯಗಳನ್ನು ಚಿತ್ರಗಳಲ್ಲಿ ಸೆರೆಹಿಡಿದ. ಅನಂತರ ಸಲೂನ್‍ಗೆ (ಪ್ಯಾರಿಸ್‍ನ ಕಲಾಕೃತಿಗಳ ಅಧಿಕೃತ ವಾರ್ಷಿಕ ಪ್ರದರ್ಶನ) ಇವನ ಎರಡು ವರ್ಣಚಿತ್ರಗಳು ಅಂಗೀಕೃತವಾದವು. ಈತ ಮಾನೆಟ್‍ನೊಂದಿಗೆ ಹೆಚ್ಚಿನ ಕಾಲವನ್ನು ಕಳೆಯತೊಡಗಿದ. ಈ ಅವಧಿಯಲ್ಲಿ ಆತನೊಡನೆ ಪ್ಯಾರಿಸ್‍ನ ಓಣಿಗಳಲ್ಲಿ ಮತ್ತು ರಾಜಮಾರ್ಗಗಳಲ್ಲಿ ಅಲೆದಾಡಿದ ಪರಿಣಾಮವಾಗಿ ಚಿರಸ್ಮರಣೀಯವಾದ ಹಲವಾರು ಚಿತ್ರಗಳನ್ನು ರಚಿಸಿದ. ಈ ಕಾಲದಲ್ಲಿಯೇ ಇವನ ದಿ ಹಂಟ್ರೆಸ್ ಡಯಾನಾ (ಬೇಟೆಗಾತಿ ಡಯಾನಾ) ಎಂಬ ವಾಸ್ತವಿಕವಾದ ಒಂದು ವರ್ಣ ಚಿತ್ರವನ್ನು ರಚಿಸಿದ. ಇವನಿಗೆ 32 ವರ್ಷಗಳಾಗುವ ವೇಳೆಗೆ ಪ್ರಸಿದ್ಧ ಕಲಾವಿದನಾಗಿದ್ದ. ಸಲೂನ್‍ಗಳಿಗಾಗಿ ಇವನ ಅನೇಕ ಚಿತ್ರಗಳು ಅಂಗೀಕೃತವಾಗಿದ್ದವು. ಹೀಗೆ ಅಂಗೀಕೃತವಾದ ಚಿತ್ರಗಳು ಅತ್ಯಂತ ಜನಪ್ರಿಯವಾದುವು; ಕಲಾವಿಮರ್ಶಕರ ಮೆಚ್ಚುಗೆಯನ್ನೂ ಪಡೆದವು.

 1874ರಲ್ಲಿ ಪ್ಯಾರಿಸ್‍ನಲ್ಲಿ ಏರ್ಪಾಡಾಗಿದ್ದ ಚಿತ್ರಪ್ರದರ್ಶ ನದಲ್ಲಿ ಇಂಪ್ರೆಷನಿಸಮ್ ವಿಧಾನಕ್ಕೆ ಸೇರಿದ ಚಿತ್ರಕಾರರ ಚಿತ್ರಗಳೊಂದಿಗೆ ಈತನ ಏಳು ಚಿತ್ರಗಳು ಪ್ರದರ್ಶನಗೊಂಡವು. ಇದರಲ್ಲಿ ಇವನನ್ನು ಈ ವಿಧಾನದ ಮುಖ್ಯ ಚಿತ್ರಕಾರನ ನ್ನಾಗಿ ಗುರುತಿಸಲಾಯಿತು. ಈ ಅವಧಿಯಲ್ಲಿ ಈತ ಚಿರ ಸ್ಮಣೀಯವಾದ ಚಿತ್ರಗಳನ್ನು ರಚಿಸಿದ. ಪ್ರಕಾಶಮಾನವಾದ ಬೆಳಕು ಮತ್ತು ಉಜ್ವಲ ಬಣ್ಣ ಗಳ ಮಿಳನವನ್ನು ಸಾಧಿಸಿದ್ದು ಈತನ ವರ್ಣಚಿತ್ರಗಳ ವೈಶಿಷ್ಟ್ಯ. 1876ರಲ್ಲಿ ರಚನೆಗೊಂಡ ಇವನ ಅತ್ಯಂತ ಪ್ರಸಿದ್ಧವಾದ ಚಿತ್ರಗಳೆಂದರೆ, ಲೆ ಮೌಲಿನ್ ದಿ ಲಾ ಗಲಿಥೆ ಮತ್ತು ಸ್ವಿಂಗ್ (ಉಯ್ಯಾಲೆ). ಕ್ರಮೇಣ ಇಂಗ್ರೆಸ್‍ನ ಅಭಿಜಾತ ವಿಧಾನದ ಕಡೆಗೆ ಇವನ ಒಲವು ಹೆಚ್ಚಾಯಿತು. ಆಲ್ಜೀರಿಯ ಮತ್ತು ಇಟಲಿಗಳಿಗೆ ಭೇಟಿನೀಡಿದ. ಇಟಲಿಯಲ್ಲಿ ರಾಫೆಲ್‍ನ ಚಿತ್ರಗಳನ್ನು ವೀಕ್ಷಿಸಿದ. ಪಾಂಪೆಯಲ್ಲಿ ಪ್ರಾಚೀನ ಗ್ರೀಕ್ ಕಲೆಯನ್ನು ನೋಡಿ ಮೆಚ್ಚಿಕೊಂಡ. ಈತ 1884ರಲ್ಲಿ ಇರ್ರೆಗ್ಯುಲಾರಿಸಟೆಸ್ ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಿದ. ಸಾಂಪ್ರದಾಯಿಕವಲ್ಲದ ಶೈಲಿಯಲ್ಲಿ ರಚನೆಗೊಂಡ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. 1886ರಲ್ಲಿ ಡುರಾಂಡ್ ರೂಯಲ್ ಎಂಬಾತ ಅಮೆರಿಕ ಮತ್ತು ನ್ಯೂಯಾರ್ಕ್‍ಗಳಲ್ಲಿ ಫ್ರೆಂಚ್ ವರ್ಣಚಿತ್ರಕಾರರ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ. ಅದು ಅತ್ಯಂತ ಯಶಸ್ವಿಯಾಯಿತು. ಅಲ್ಲಿಯೂ ಇವನ ಚಿತ್ರಗಳು ಜನಪ್ರಿಯವಾದವು. ಅನಂತರ ಈತ ಸ್ಪೇನ್‍ಗೆ ಹೋದ. ಅಲ್ಲಿ ಗೋಯಾನನ ಚಿತ್ರಗಳು ಇವನನ್ನು ಆಕರ್ಷಿಸಿದವು. 1904ರಲ್ಲಿ ಸಲೂನ್‍ನಲ್ಲಿ ಇವನ ಚಿತ್ರಗಳನ್ನು ಪ್ರದರ್ಶಿಸಲು ಒಂದು ಕೊಠಡಿಯನ್ನೇ ಮೀಸಲಿಡಲಾಯಿತು. ಇದು ಯಾರೇ ಒಬ್ಬ ಕಲಾವಿದನಿಗೆ ಸಲ್ಲುವ ದೊಡ್ಡ ಗೌರವವಾಗಿತ್ತು. ಅನಂತರ ಈತನಿಗೆ ಆಫೀಸರ್ಸ್ ಕ್ರಾಸ್ ಪ್ರಶಸ್ತಿ ದೊರೆಯಿತು. ಈತ 1919 ಡಿಸೆಂಬರ್ 13 ರಂದು ಕೇನ್ಸ್‍ನಲ್ಲಿ ನಿಧನಹೊಂದಿದ.
ಇಂಪ್ರೆಷನಿಸ್ಟ್ ವಿಧಾನ ಟೀಕೆಗೆ ಗುರಿಯಾಗಿದ್ದ ಕಾಲದಲ್ಲಿ ಈತ ಅದನ್ನು ಸಮರ್ಥಿಸಿದ. ಈ ವಿಧಾನದಲ್ಲಿ ಹೊರಾಂಗಣ ದೃಶ್ಯಗಳನ್ನು ಚಿತ್ರಿಸಿದ. ಚಿತ್ರಗಳಲ್ಲಿ ಆಳವನ್ನು ಸಾಧಿಸಲು ನೇರಳೆ ವರ್ಣವನ್ನು ಕಡುಗೆಂಪಿನೊಂದಿಗೆ ಮಿಲನಗೊಳಿಸಿ ಬಳಸಿದ. ಇದೇ ಪರಿಣಾಮ ತರಲು ಹಿಂದಿನ ಚಿತ್ರಕಾರರು ಕಪ್ಪುಬಣ್ಣವನ್ನು ಬಳಸುತ್ತಿದ್ದರು. ಈತ ಯಾವುದೇ ಒಂದು ಸಂಪ್ರದಾಯಕ್ಕೆ ಬದ್ಧನಾಗಿರಲಿಲ್ಲ. ವೈಯಕ್ತಿಕ ಶೈಲಿಯಲ್ಲಿ ಹಿಂದಿನ ಪರಂಪರೆ ಮತ್ತು ತನ್ನ ಸಮಕಾಲೀನ ಆಧುನಿಕ ವಿಧಾನಗಳನ್ನು ಸಮನ್ವಯಗೊಳಿಸಿದ. ಈತ ಭಾವಚಿತ್ರ, ಸ್ತಬ್ಧಚಿತ್ರ, ಭೂದೃಶ್ಯಗಳು, ಪುರಾಣ ಪ್ರಸಿದ್ಧ ಸಂದರ್ಭಗಳ ದೃಶ್ಯಗಳು ಮತ್ತು ಸಮಕಾಲೀನ ಜೀವನದ ಚಿತ್ರಗಳು-ಹೀಗೆ ಎಲ್ಲವನ್ನೂ ಚಿತ್ರಿಸಿದ್ದಾನೆ. ಭಾವಚಿತ್ರರಚನೆ ಇವನಿಗೆ ಪ್ರಿಯವಾದ ಪ್ರಕಾರವಾಗಿತ್ತು. ಪ್ರಾಚೀನ ಪ್ರಸಿದ್ಧ ವರ್ಣಚಿ ತ್ರಕಾರರಿಂದ ಅದರಲ್ಲೂ ರೂಬೆನ್ಸ್ ಮತ್ತು 18ನೆಯ ಶತಮಾನದ ಫ್ರೆಂಚ್ ವರ್ಣ ಚಿತ್ರಕಾರರಿಂದ ಪ್ರಭಾವಿತ ನಾಗಿ ತನ್ನ ಕಾಲದ ಉಲ್ಲಾ ಸದ, ಉತ್ಸಾಹದ, ನಿಶ್ಚಿತ ಜೀವನದರ್ಶನದ ಚಿತ್ರಣಗ ಳನ್ನು ಚಿತ್ರಕಲೆಯ ಮೂಲಕ ನೀಡಿದ. ಪ್ರಾಚೀನ ಚಿತ್ರಕಾರರ ಪ್ರಭಾವದಿಂದ ತನ್ನ ಇಂಪ್ರೆಷನಿಸಮ್ ವಿಧಾನವನ್ನು ತ್ಯಜಿಸಿ ಖಚಿತ ಆಕೃತಿಗಳ ಯಥಾರ್ಥ ಚಿತ್ರಣಕ್ಕೆ ಮತ್ತು ಚಿತ್ರಸಂಯೋಜನೆಗೆ ಮಹತ್ವ ಕೊಟ್ಟ. ಬೇತರ್ಸ್ (ಸ್ನಾನ ಮಾಡುವವರು, 1880) ಎಂಬ ವಿಶಾಲ ಚಿತ್ರಪಟದಲ್ಲಿ ಈ ಒಂದು ಹೊಸ ಅಭಿಜಾತ ವಿಧಾನವನ್ನು ಕಾಣುಬಹುದಾಗಿದೆ.	
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ